ಗೋಕರ್ಣ

	ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನಲ್ಲಿದೆ. ಅಖಿಲಭಾರತದಲ್ಲಿ ತ್ರಿಸ್ಥಲಿ ಎಂದು ಹೆಸರಾಗಿರುವ ಶಿವಸ್ಥಾನಗಳಲ್ಲಿ ಇದೂ ಒಂದು. ಉಳಿದೆರಡು ಕಾಶಿ ಮತ್ತು ರಾಮೇಶ್ವರ. ಈ ಕ್ಷೇತ್ರ ಪೌರಾಣಿಕವಾಗಿ ಅಲ್ಲದೆ ಚಾರಿತ್ರಿಕವಾಗಿಯೂ ಪ್ರಾಮುಖ್ಯ ಪಡೆದಿದೆ. 

	ತ್ರೇತಾಯುಗದಲ್ಲಿ ರಾವಣ ಈಶ್ವರನನ್ನು ಕುರಿತು ತಪಸ್ಸುಮಾಡಿ ಅವನಿಂದ ಆತ್ಮಲಿಂಗವನ್ನು ಪಡೆದು ಮನೆಗೆ ಒಯ್ಯುತ್ತ ನಡುವೆ ಗೋಕರ್ಣದಲ್ಲಿ ಬ್ರಹ್ಮಚಾರಿ ರೂಪದ ಗಣಪತಿಯ ಕೈಯಲ್ಲಿ ಅದನ್ನು ಕೊಟ್ಟು ಸಂಧ್ಯಾವಂದನೆಗೆ ಹೋದನೆಂದೂ ಹೇಳಿದ ವಾಯಿದೆಯೊಳಗೆ ರಾವಣ ಹಿಂತಿರುಗದೆ ಹೋದಾಗ ಗಣಪತಿ ಅದನ್ನು ನೆಲದಮೇಲೆ ಇಟ್ಟನೆಂದೂ ಪೂಜೆ ತೀರಿಸಿಕೊಂಡು ಹಿಂತಿರುಗಿದ ರಾವಣ ಅದನ್ನು ಕೀಳಲು ವ್ಯರ್ಥಪ್ರಯತ್ನ ಮಾಡಿದಾಗ ಅದು ಆಕಳ ಕಿವಿಯ ಆಕಾರಕ್ಕೆ ತಿರುಗಿತೆಂದೂ ಪುರಾಣದ ಹೇಳಿಕೆ. ಮಹಾಬಲೇಶ್ವರ ಎನ್ನುವುದು ಈ ಆತ್ಮಲಿಂಗವೇ. ಭೂಗರ್ಭದಿಂದೆದ್ದ ಕರ್ಬಂಡೆಯೊಂದರ ಚೂಪಾದ ತುದಿಯನ್ನು ಪೂರ್ಣ ಬಯ್ತಿಟ್ಟು ಸಾಲಿಗ್ರಾಮಶಿಲೆಯ ಕಪ್ಪು ಪಾಣೀಪೀಠವೊಂದೇ ಗರ್ಭಗುಡಿಯಲ್ಲೀಗ ಕಾಣಿಸುವ ವಸ್ತು. ಮಹಾಬಲೇಶ್ವರ ಲಿಂಗವಲ್ಲದೆ ಇಲ್ಲಿ ಇತರ 30 ಲಿಂಗಗಳೂ 30 ತೀರ್ಥಗಳು ಇವೆ. 

	ಚಾರಿತ್ರಿಕವಾಗಿ ಇದರ ಅಸ್ತಿತ್ವ ಕ್ರಿಸ್ತಶಕದ ಆರಂಭಕ್ಕೆ ಹೋಗುತ್ತದೆ. ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಕದಂಬರ ಕಾಲದಿಂದ ವಿಜಯನಗರದ ಅರಸರ ಆಳ್ವಿಕೆಯ ಕೊನೆಯವರೆಗೂ ರಾಜ ಮಹಾರಾಜರುಗಳ ಸೇವೆ ನಡೆಯುತ್ತಿತೆಂಬ ಅಂಶ ಶಾಸನಗಳಿಂದ ವ್ಯಕ್ತಪಡುತ್ತದೆ. ಕಾಲಕಾಲಕ್ಕೆ ಅವರೂ ಇತರ ಶ್ರೀಮಂತರೂ ಭೂ ಧನ ಕನಕಾದಿಗಳನ್ನು ದತ್ತಿಯಾಗಿ, ಈ ದೇವಾಲಯಕ್ಕೆ ಸಲ್ಲಿಸುತ್ತಬಂದಿದ್ದಾರೆ.  

	ಮಹಾಬಲೇಶ್ವರ ದೇವರ ಗರ್ಭಗುಡಿಯ ವಿಸ್ತೀರ್ಣ 30 ಚದರ ಅಡಿಗಳಷ್ಟು. ಇದರ ಶಿಖರಕ್ಕೆ ಹಿತ್ತಾಳೆಯ ಕಲಶವಿದೆ. ಸಭಾಮಂಟಪ 60'(30' ಅಳತೆಯದು. ಗರ್ಭಗುಡಿ ಅನಾದಿ ಕಾಲದ್ದು. ಚಂದ್ರ ಶಾಲೆ ಕುಂದಾಪುರದ ಹಲಸುನಾಡು ವಿಶ್ವೇಶ್ವರಯ್ಯ ಪಾರುಪತ್ಯಗಾರನಾಗಿದ್ದಾಗ ಕಟ್ಟಿಸಿಕೊಟ್ಟದ್ದು. ನಂದಿ ಮಂಟಪ ಕೂಡ ಅವನಿಂದಾದದ್ದು. ಬಿದನೂರಿನ ರಾಣಿ ಚಿನ್ನಮ್ಮಾಜಿ ಮತ್ತು ರಾಜ ಸೋಮಶೇಖರರ ಕಾಲದಲ್ಲಿ ಈತ ಪಾರುಪತ್ಯಗಾರನೆಂದು ನಿಯುಕ್ತನಾಗಿದ್ದ. ಮಹಾಲಿಂಗದ ಉದ್ದ 3". ಸಭಾಮಂಟಪದಲ್ಲಿ ಪಾರ್ವತಿ. ಗಣಪತಿಗಳೂ ಮಧ್ಯದಲ್ಲಿ ನಂದಿಯೂ ಮೂರ್ತಿಮತ್ತಾಗಿದ್ದಾರೆ. ಫಾಲ್ಗುಣ ಶುದ್ಧ ಪಾಡ್ಯದಂದು ರಥೋತ್ಸವ ಜರುಗುತ್ತದೆ. ಶಿವರಾತ್ರಿ ಕಾಲದ ಜಾತ್ರೆ ಪ್ರಸಿದ್ಧ. ಭಾರತದ ಎಲ್ಲ ಭಾಗಗಳಿಂದಲೂ ಯಾತ್ರಿಕರು ಇಲ್ಲಿಗೆ ಬರುತ್ತಾರೆ. 
	ಕೋಟಿತೀರ್ಥ (ನೋಡಿ- ಕೋಟಿತೀರ್ಥ) ಇಲ್ಲಿಯ ತೀರ್ಥಗಳಲ್ಲೆಲ್ಲ ದೊಡ್ಡದು. ಇದರ ಪಶ್ಚಿಮಕ್ಕೆ ನರಸಿಂಹ ದೇವಾಲಯವಿದೆ; ದಕ್ಷಿಣಕ್ಕೆ ಅಗಸ್ತ್ಯ, ಸುಮಿತ್ರಾ, ಗಂಗಾತೀರ್ಥಗಳೆಂಬ ಗುಹೆಗಳಿವೆ. ಶತಶೃಂಗದ ಮೇಲೆ ಗೋಗರ್ಭ ತೀರ್ಥ, ಬ್ರಹ್ಮಕಮಂಡಲ ತೀರ್ಥ ಮತ್ತು ಮಹೇಶ್ವರರಾರಣ್ಯಗಳಿವೆ. ಆ ಗುಡ್ಡದ ಕೆಳಗೆ ಮಾಲಿನಿ, ಸುಮಾಲಿನಿ, ಸೂರ್ಯ, ಚಂದ್ರ ಮತ್ತು ಅನಂತ ಎಂಬ ತೀರ್ಥಗಳಿವೆ. 

	ಇಲ್ಲಿಯ ಶಂಕರನಾರಾಯಣ ದೇವಾಲಯದ ಸನಿಹದಲ್ಲೂ ಒಂದು ತೀರ್ಥವಿದೆ. ವೈತರಣಿ ಅಲ್ಲಿನ 2ನೆಯ ತೀರ್ಥ. ದೇವರೆದುರು ಜ್ಞಾನ, ವೈರಾಗ್ಯ, ಮುಕ್ತಿಗಳೆಂಬ 3 ಮಂಟಪಗಳಿವೆ. 

	ಗೋಕರ್ಣದ ಗಣಪತಿ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ (ಸು. 6 7 ನೆಯ ಶತಮಾನ). ಇಲ್ಲಿ ಬಟ್ಟೆ ವಿನಾಯಕನೆಂದು ಪ್ರಸಿದ್ಧಿ ಹೊಂದಿರುವ ಗಣಪತಿ ವಿಜಯನಗರ ಕಾಲದ್ದಾಗಿದೆ. ಹೊಯ್ಸಳರ ಕಾಲದ ಬಹು ನಾಜೂಕಾದ ಒಂದು ವೀರಗಲ್ಲೂ ಕೋಟಿತೀರ್ಥದ ಪರಿಸರದಲ್ಲಿದೆ. ಈ ತೀರ್ಥದ ಕಟ್ಟಿನಲ್ಲಿರುವ ಉತ್ಕುಟಿಕಾಸನದ ಗಣಪತಿ 14ನೆಯ ಶತಕದ್ದು. ಅಹಲ್ಯಾಬಾಯಿ ಹೋಳ್ಕರ್ ಸ್ಥಾಪಿಸಿದ ಒಂದು ಛತ್ರ ಇಲ್ಲಿದೆ. ಇದರ ಚಾವಣಿಯಲ್ಲಿರುವ ನಾಗಬಂಧ ವೈಶಿಷ್ಟ್ಯ ಪೂರ್ಣವಾದುದು. 

	ಗೋಕರ್ಣದ ರಘೂತ್ತಮ ಮಠದ ಮೊದಲನೆಯ ಹವ್ಯಕ (ಶಾಂಕರ) ಸ್ವಾಮಿಯ ಕಾಲ ಕ್ರಿ. ಶ. 720. ವಿದ್ಯಾರಣ್ಯರು 1389-90ರಲ್ಲಿ ಆ ಮಠಕ್ಕೊಂದು ತಾಮ್ರಶಾಸನವಿತ್ತು, ಕರ್ತವ್ಯನಿರ್ದೇಶ ಮಾಡಿ ಗೌರವವನ್ನು ಸಲ್ಲಿಸಿದುದಾಗಿ ತಿಳಿದು ಬರುತ್ತದೆ. 

	ಗೋಕರ್ಣದ ಪುರೋಹಿತ ವರ್ಗದವರು ಧರ್ಮಶೀಲರು. ದಯಾಳುಗಳು ಮತ್ತು ಅತಿಥಿಪ್ರಿಯರು ಎಂದು ಹೆಸರಾಗಿದ್ದಾರೆ. 1857ರ ಸಿಪಾಯಿದಂಗೆಯಲ್ಲಿ ಭಾಗವಹಿಸಿದ ವೀರರನ್ನು ಇವರು ರಕ್ಷಿಸಿದರೆನ್ನಲಾಗಿದೆ. 

	ಭೂಮಾರ್ಗ, ಜಲಮಾರ್ಗಗಳೆರಡರಿಂದಲೂ ಗೋಕರ್ಣಕ್ಕೆ ಹೋಗಬಹುದು. ಗೋಕರ್ಣಕ್ಕೆ 3 ಕಿ.ಮೀ. ದೂರದ ತದಡಿ ಬಂದರಕ್ಕೆ ಉಗಿ ಹಡಗಿನಿಂದ ಹೋಗಬಹುದು. ಅನಂತರ ದೋಣಿಯ ಮೂಲಕ ಪ್ರವಾಸ; ಕಾರವಾರ ಬಂದರಲ್ಲಿಳಿದು ಅಲ್ಲಿಂದ 48 ಕಿ.ಮೀ. ಕರಾವಳಿಯನ್ನು ಬಸ್ಸಿನ ಮೂಲಕ ದಾಟಿ ಹೋಗಬೇಕು; ಹುಬ್ಬಳ್ಳಿ ಗೋಕರ್ಣಕ್ಕೆ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ ಗೋಕರ್ಣಕ್ಕೆ ನೇರ ಬಸ್ಸುಗಳಿವೆ.
(ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ